ನಿರುದ್ಯೋಗ-
	ಉತ್ಪಾದನಾಂಗವೊಂದನ್ನು ಯಾವುದೇ ಸಂಸ್ಥೆ ಅಥವಾ ಸರ್ಕಾರ ಬಳಸಿಕೊಳ್ಳದೆ ಇರುವ, ಉತ್ಪಾದನೆಯಲ್ಲಿ ಬಳಕೆಗೆ ಒದಗಿಬರುವಂತಿದ್ದೂ ವಾಸ್ತವವಾಗಿ ಬಳಸಿಕೊಳ್ಳದಿರುವ ಸ್ಥಿತಿ (ಅನೆಂಪ್ಲಾಯ್‍ಮೆಂಟ್)ನಿರುದ್ಯೋಗ, ಉತ್ಪದನಾಂಶವೊಂದನ್ನು ಒಂದು ಸಂಸ್ಥೆ ಪಡೆದುಕೊಂಡೂ ಅದನ್ನು ಬಳಸಿಕೊಳ್ಳದೆ ಇರಬಹುದಾದರೂ ಅದನ್ನು ಪಡೆದುಕೊಳ್ಳದೆ ಇರುವಂಥ ಸ್ಥಿತಿಯನ್ನೇ ಸಾಮಾನ್ಯವಾಗಿ ನಿರುದ್ಯೋಗವೆಂದು ಹೇಳಲಾಗುತ್ತದೆ. ಉತ್ಪಾದನಾಂಗಗಳಾದ ಭೂಮಿ, ದುಡಿಮೆ, ಬಂಡವಾಳ, ಸಂಘಟನೆ ಇವುಗಳಲ್ಲಿ ಯಾವುದನ್ನು ಬಳಸಿಕೊಳ್ಳದೆ ಇದ್ದರೂ ಅದನ್ನು ನಿರುದ್ಯೋಗವೆಂದು ಕರೆಯಬಹುದು. ಆದರೆ ದುಡಿಮೆ ಅಥವಾ ಶ್ರಮಕ್ಕೆ ಸಂಬಂಧಿಸಿದಂತೆ ಈ ಪದ ಸಾಮಾನ್ಯವಾಗಿ ಬಳಕೆಯಲ್ಲಿದೆ. ಇಂಥ ನಿರುದ್ಯೋಗದಲ್ಲಿ ನಾನಾ ಬಗೆಗಳುಂಟು. ಅವನ್ನು ಸ್ಥೂಲವಾಗಿ ಹೀಗೆ ವಿಂಗಡಿಸಬಹುದು: 

	1. ಅನಿಯತ: ದುಡಿಮೆಗೆ ಬೇಡಿಕೆ ಏಕಪ್ರಕಾರವಾಗಿ ಇಲ್ಲದಾಗ, ಅನಿಶ್ಚಿತವಾಗಿದ್ದಾಗ, ಆಗಿಂದಾಗ್ಗೆ ನಿರುದ್ಯೋಗ ಸಂಭವಿಸಬಹುದು. ಅತಿವೃಷ್ಟಿ ಅನಾವೃಷ್ಟಿಗಳಿಂದಲೋ ಪ್ರವಾಹಗಳಿಂದಲೋ ಕೈಗೊಳ್ಳಬೇಕಾಗುವ ಕಾಮಗಾರಿಗಾಗಿ ಒಮ್ಮಿಂದೊಮ್ಮೆಗೇ ಕಾರ್ಮಿಕರಿಗೆ ಬೇಡಿಕೆ ಏರಬಹುದು. ಆ ಕೆಲಸ ಮುಗಿದಾಗ ಅವರಿಗೆ ನಿರುದ್ಯೋಗ ಉಂಟಾಗುತ್ತದೆ.

	2. ಚಕ್ರೀಯ: ಬಂಡವಾಳವಾದಿ ಅರ್ಥವ್ಯವಸ್ಥೆಯಲ್ಲಿ ಸರಿಯಾದ ನಿಯಂತ್ರಣ ಇಲ್ಲದಿದ್ದರೆ ಆಗಿಂದಾಗ್ಗೆ ಆರ್ಥಿಕ ಚಟುವಟಿಕೆಗಳಲ್ಲಿ ಏರುತಗ್ಗುಗಳುಂಟಾಗುತ್ತಿರುತ್ತವೆ. ಚಟುವಟಿಕೆಗಳ ಏರಿಕೆಯ ಕಾಲದಲ್ಲಿ ಕಾರ್ಮಿಕರಿಗೆ ವಿಶೇಷ ಬೇಡಿಕೆಯೂ ಇಳಿಮೆಯಾದಾಗ ಬೇಡಿಕೆಯಲ್ಲಿ ಇಳಿತಾಯವೂ ಉಂಟಾಗುತ್ತವೆ. ಆರ್ಥಿಕತೆಯಲ್ಲಿ ಸಾರ್ವತ್ರಿಕವಾಗಿ ತಲೆದೋರುವ ಈ ಏರಿಳಿತಗಳ ಫಲವಾದ ಉದ್ಯೋಗ-ನಿರುದ್ಯೋಗ ಸ್ಥಿತಿಗಳು ಚಕ್ರೀಯವಾಗಿ ಸಂಭವಿಸುತ್ತಿರುತ್ತವೆ.

	3. ಘರ್ಷಣಾತ್ಮಕ: ಆರ್ಥಿಕತೆ ಸಂಪೂರ್ಣವಾಗಿ ಗತಿಶೀಲವಾಗಿಲ್ಲದ್ದರಿಂದಲೂ ನಿರುದ್ಯೋಗ ಸಂಭವಿಸುತ್ತದೆ. ಒಂದು ವಿಭಾಗದಲ್ಲಿ ಕಾರ್ಮಿಕರು ನಿರುದ್ಯೋಗಕ್ಕೆ ಒಳಗಾಗಿರುವಾಗ ಇನ್ನೊಂದು ವಿಭಾಗದಲ್ಲಿ ಕಾರ್ಮಿಕರಿಗೆ ಬೇಡಿಕೆ ಇದ್ದೂ ಅವರು ದೊರಕದೆ ಇರಬಹುದು. ಉದ್ಯೋಗಾರ್ಥಿಗಳು ಒಂದೆಡೆಯಿಂದ ಇನ್ನೊಂದೆಡೆಗೆ ಚಲಿಸಲು ಅಡಚಣೆಗಳಿಂದಾಗಿ ಈ ಪರಿಸ್ಥಿತಿ ಉಂಟಾಗುತ್ತದೆ. ಕೆಲವರು ಒಂದು ಉದ್ಯೋಗವನ್ನು ಬಿಟ್ಟು ಇನ್ನೊಂದು ಉದ್ಯೋಗವನ್ನು ಪಡೆಯುವವರೆಗೆ ತಾತ್ಕಾಲಿಕವಾಗಿ ನಿರುದ್ಯೋಗಿಗಳಾಗಿರುತ್ತಾರೆ.

	4. ಶ್ರಾಯೀಣ: ವರ್ಷದ ಕೆಲವು ಶ್ರಾಯಗಳಲ್ಲಿ ಅಥವಾ ಋತುಗಳಲ್ಲಿ ಕೆಲವು ಬಗೆಯ ಕಾರ್ಮಿಕರಿಗೆ ಬೇಡಿಕೆ ತಗ್ಗುವುದುಂಟು. ಉದಾಹರಣೆಗೆ, ಕೃಷಿ ಕಾರ್ಮಿಕರಿಗೆ ಸುಗ್ಗಿಯ ಕಾಲದಲ್ಲಿ ವಿಶೇಷ ಬೇಡಿಕೆ; ಬೇಸಾಯದ ಕೆಲಸ ಇಲ್ಲದಿದ್ದಾಗ ನಿರುದ್ಯೋಗ.

	5. ಸಂರಚನಾತ್ಮಕ: ಆರ್ಥಿಕತೆಯ ರಚನೆಯಲ್ಲಿ ಆಗುತ್ತಿರುವ ಬದಲಾವಣೆಗಳಿಂದಾಗಿಯೂ ನಿರುದ್ಯೋಗ ಸಂಭವಿಸುತ್ತದೆ. ಕೆಲವು ಕೈಗಾರಿಕೆಗಳು ಕ್ಷೀಣದಶೆಗೆ ಬರುತ್ತಲೂ ಕೆಲವು ಹೊಸ ಕೈಗಾರಿಕೆಗಳು ಬೆಳೆಯುತ್ತಲೂ ಇರುವುದರ ಫಲವಾಗಿ ಉದ್ಯೋಗದ ಬೇಡಿಕೆ-ಸರಬರಾಜುಗಳಲ್ಲಿ ಏರುತಗ್ಗುಗಳಾಗುತ್ತವೆ. ಈ ಬದಲಾವಣೆ ಶೀಘ್ರವಾಗಿ ಸಂಭವಿಸುತ್ತಿದ್ದರೆ ಅದರಿಂದ ಸಂಭವಿಸುವ ನಿರುದ್ಯೋಗ ಸಂರಚನಾತ್ಮಕವೆನ್ನಬಹುದು.

	6. ತಂತ್ರಜ್ಞಾನ ಫಲ: ಕೈಗಾರಿಕಾ ಸಂಸ್ಥೆಗಳಲ್ಲಿ ಹೊಸ ಉತ್ಪಾದನ ತಂತ್ರಗಳನ್ನು ಜಾರಿಗೆ ತರುವುದರಿಂದ, ಹೊಸ ಹಾಗೂ ಸುಧಾರಿತ ಯಂತ್ರಗಳನ್ನು ಸ್ಥಾಪಿಸುವುದರಿಂದ ದೈಹಿಕ ದುಡಿಮೆಯ ಅಗತ್ಯ ಕಡಿಮೆಯಾಗಿ ನಿರುದ್ಯೋಗ ಉಂಟಾಗುತ್ತದೆ. ಹೊಸ ತಂತ್ರವಿದ್ಯೆ ಹಾಗೂ ಯಂತ್ರಗಳ ಅನ್ವಯಕ್ಕೆ ಅಗತ್ಯವಾದ ಕೌಶಲವನ್ನು ಕಾರ್ಮಿಕರು ಪಡೆದಾಗ ಅವರಿಗೆ ಮತ್ತೆ ಉದ್ಯೋಗ ಲಭ್ಯವಾಗಬಹುದು.

	7. ಕೆಲವು ಜನರು ದೈಹಿಕವಾಗಿ ಅಥವಾ ಮಾನಸಿಕವಾಗಿ ದುರ್ಬಲರೋ ಅಸ್ವಸ್ಥರೋ ಆಗಿರುವುದರ ಫಲವಾಗಿ ದುಡಿಯು ಸಾಮಥ್ರ್ಯ ಪಡೆದಿಲ್ಲದಿರಬಹುದು. ನಿರುದ್ಯೋಗಕ್ಕೆ ಇದೂ ಒಂದು ಕಾರಣ.

	8. ಐಚ್ಫಿಕ: ಕೆಲವರು ಆರ್ಥಿಕವಾಗಿ ಅನುಕೂಲಸ್ಥಿತಿಯಲ್ಲಿರುವುದರಿಂದಲೋ ಸೋಮಾರಿತನದಿಂದಲೋ ಸಮಾಜದಲ್ಲಿ ಪರೋಪಜೀವಿಗಳಾಗಿಯೋ ಉದ್ಯೋಗವನ್ನು ಅರಸದೆ ಇರುವುದುಂಟು ; ಇಂಥವರು ಸ್ವಂತ ಇಚ್ಛೆಯಿಂದಲೇ ನಿರುದ್ಯೋಗಿಗಳಾಗಿರುವರು.

	ಅಳೆಯುವ ವಿಧಾನಗಳು: ನಿರುದ್ಯೋಗದ ಗಾತ್ರವನ್ನು ಗೊತ್ತು ಹಚ್ಚಲು ಅನೇಕ ವಿಧಾನಗಳನ್ನು ಅನುಸರಿಸಲಾಗುತ್ತಿದೆ. ಮೊದಮೊದಲು ಕಾರ್ಮಿಕ ಸಂಘಗಳು ತಮ್ಮ ಸದಸ್ಯರಲ್ಲಿರುವ ನಿರುದ್ಯೋಗದ ಗಾತ್ರವನ್ನು ತಮ್ಮ ನಿಯತಕಾಲಿಕ ವರದಿಗಳಲ್ಲಿ ತೋರಿಸುತ್ತಿದ್ದವು. ಆದರೆ ಇಂಥ ಸಂಘಗಳ ಸದಸ್ಯರಲ್ಲದ ಕಾರ್ಮಿಕರಲ್ಲಿಯ ನಿರುದ್ಯೋಗದ ಗಾತ್ರವನ್ನು ತಿಳಿಯಲು ಸಾಧ್ಯವಾಗುತ್ತಿರಲಿಲ್ಲ.

	ಸರ್ಕಾರದ ಮಟ್ಟದಲ್ಲಿ ನಿರುದ್ಯೋಗದ ಗಾತ್ರವನ್ನು ಕಂಡುಹಿಡಿಯಲು ಮೊದಲ ಪ್ರಯತ್ನವನ್ನು ಅಮೆರಿಕದಲ್ಲಿ ಮಾಡಲಾಯಿತು. ಅಮೆರಿಕದಲ್ಲಿ ಒಂದನೆಯ ಮಹಾಯುದ್ಧದ ಪೂರ್ವದಲ್ಲಿ ಹಾಗೂ ಅನಂತರ ಅಲ್ಲಿಯ ಉದ್ಯಮ ಸಂಸ್ಥೆಗಳು ತಮ್ಮ ವೇತನ ಪಟ್ಟಿಯಲ್ಲಿ ತೋರಿಸಿದ ಕಾರ್ಮಿಕರ ಸಂಖ್ಯೆಯ ಆಧಾರದ ಮೇಲೆ ಕಳುಹಿಸುತ್ತಿದ್ದ ಉದ್ಯೋಗ-ವರದಿಗಳ ಮೇಲಿಂದ ಗೊತ್ತುಹಚ್ಚಲಾಗುತ್ತಿತ್ತು. ಈ ಪದ್ಧತಿಯನ್ನು ಈಗಲೂ ಕೆಲವು ರಾಷ್ಟ್ರಗಳಲ್ಲಿ ಕಾಣಬಹುದಾಗಿದೆ. ನಿಯತಕಾಲಿಕವಾದ ಇಂಥ ವರದಿಗಳ ಆಧಾರದಿಂದ ಎರಡು ಅವಧಿಗಳ ನಡುವೆ ಉದ್ಯೋಗಾವಕಾಶಗಳಲ್ಲಿ ಆದ ಕಡಿತದಿಂದ ನಿರುದ್ಯೋಗದ ಗಾತ್ರವನ್ನು ಗೊತ್ತುಹಚ್ಚಲಾಗುತ್ತಿತ್ತು.

	ನಿರುದ್ಯೋಗ ವಿಮಾಯೋಜನೆ ಜಾರಿಗೆ ಬಂದಾಗಿನಿಂದ ನಿರುದ್ಯೋಗದ ಗಾತ್ರವನ್ನು ಗೊತ್ತುಹಚ್ಚುವ ವಿಧಾನದಲ್ಲಿ ವಿಶೇಷ ಸುಧಾರಣೆ ಕಂಡುಬಂದಿದೆ. ನಿರುದ್ಯೋಗ ವಿಮೆಯ ಸೌಲಭ್ಯ ಪಡೆಯಲಿಚ್ಛಿಸುವ ಎಲ್ಲ ಕಾರ್ಮಿಕರು ತಮ್ಮ ಹೆಸರನ್ನು ಸ್ಥಾನಿಕ ಉದ್ಯೋಗ ವಿನಿಮಯ ಕೇಂದ್ರದಲ್ಲಿ ನಮೂದು ಮಾಡಿಸಬೇಕೆಂಬ ನಿಯಮವನ್ನು ಹಾಕಲಾಯಿತು. ಇದರಿಂದ ನಿರುದ್ಯೋಗಿ ಕಾರ್ಮಿಕರ ಸಂಖ್ಯೆಯನ್ನು ಕಂಡುಹಿಡಿಯಲು ಅನುಕೂಲವಾಯಿತು. ಈ ಪದ್ಧತಿಯನ್ನು 1921ರಲ್ಲಿ ಬ್ರಿಟನ್ನಿನಲ್ಲಿ ಪ್ರಾರಂಭಿಸಲಾಯಿತು. ಮುಂದೆ ಇದು ರಾಷ್ಟ್ರೀಯ ಕಾರ್ಮಿಕ ನೀತಿಯನ್ನು ರೂಪಿಸಲು ಕೂಡ ಸಹಾಯಕವಾಯಿತು. ಅಮೆರಿಕದಲ್ಲಿ ನಿರುದ್ಯೋಗ ವಿಮೆಯನ್ನು 1940ರಲ್ಲಿ ಪ್ರಾರಂಭಿಸಿದಂದಿನಿಂದ ದೇಶದಲ್ಲಿಯ ನಿರುದ್ಯೋಗದ ಪರಿಮಾಣವನ್ನು ಕಂಡುಹಿಡಿಯಲು ಇದೇ ವಿಧಾನವನ್ನು ಅನುಸರಿಸಲಾಗುತ್ತಿದೆ.

	ಉದ್ಯೋಗ ವಿನಿಮಯ ಕೇಂದ್ರಗಳಲ್ಲಿ ನಮೂದು ಮಾಡಿಸಿದ ಉದ್ಯೋಗಾರ್ಥಿ ಕಾರ್ಮಿಕರ ಸಂಖ್ಯೆಯಿಂದ ನಿರುದ್ಯೋಗದ ಪರಿಮಾಣವನ್ನು ಕಂಡುಹಿಡಿಯುವುದು ಸಾಮಾನ್ಯವಾಗಿ ಎಲ್ಲ ದೇಶಗಳಲ್ಲಿ ಬಳಕೆಯಲ್ಲಿರುವ ಪದ್ಧತಿಯಾಗಿದೆ. ಆದರೆ ಈ ಪದ್ಧತಿಯೂ ಅಷ್ಟು ಸಮಂಜಸವೆನಿಸಿಲ್ಲ. ಏಕೆಂದರೆ ಎಷ್ಟೋ ಕಾರ್ಮಿಕರು ತಮ್ಮ ಹೆಸರುಗಳನ್ನು ನಮೂದು ಮಾಡಿಸದೆ ಇರುವ ಸಂಭವ ಹೆಚ್ಚಾಗಿದೆ. ತಮ್ಮ ಪ್ರಸ್ತುತ ಉದ್ಯೋಗದಿಂದ ತೃಪ್ತರಾಗದವರೂ ಯೋಗ್ಯ ಉದ್ಯೋಗ ದೊರಕಿಸಲು ತಮ್ಮ ಹೆಸರನ್ನು ನೋಂದಾಯಿಸಬಹುದು. ನಮೂದು ಮಡಿಸಿದ ಕೆಲವರು ತಮಗೆ ಉದ್ಯೋಗ ದೊರೆತ ಮೇಲೆ ಆ ಬಗ್ಗೆ ಉದ್ಯೋಗ ವಿನಿಮಯ ಕೇಂದ್ರಕ್ಕೆ ತಿಳಿಸಲು ತಪ್ಪಬಹುದು. ಈ ಪದ್ಧತಿಯಲ್ಲಿ ಇಂಥ ಅನೇಕ ಲೋಪದೋಷಗಳಿವೆ.

	ಮಾದರಿ ಸರ್ವೇಕ್ಷಣೆ ಇನ್ನೊಂದು ವಿಧಾನ. ಆಯ್ದ ವಿಭಾಗದಲ್ಲಿ ಪ್ರತಿಕುಟುಂಬದಲ್ಲಿಯ ನಿರುದ್ಯೋಗಿಗಳ ಸಂಖ್ಯೆಯನ್ನು ಕುಟುಂಬದ ಮುಖ್ಯಸ್ಥನ ಹೇಳಿಕೆಯಿಂದಲೇ ಪಡೆದುಕೊಳ್ಳಲಾಗುತ್ತದೆ. ಇದರ ಆಧಾರದ ಮೇಲೆ ನಿರುದ್ಯೋಗದ ಗಾತ್ರ ಹಾಗೂ ಸ್ವರೂಪವನ್ನು ಅರಿಯಬಹುದು.

	ಪರಿಹಾರೋಪಾಯಗಳು: ಯಾವುದೇ ದೇಶದ ಸಾಮಾಜಿಕ ನೀತಿಯ ಮುಖ್ಯ ಉದ್ದೇಶವೆಂದರೆ ಸ್ವ ಇಚ್ಛೆಯಿಂದ ಅಲ್ಲದೆ ಇತರ ಕಾರಣಗಳಿಂದ ಉಂಟಾದ ನಿರುದ್ಯೋಗವನ್ನು ನಿವಾರಿಸುವುದು. ಇದಕ್ಕಾಗಿ ಅನೇಕ ವಿಧಾನಗಳನ್ನು ಅನುಸರಿಸಲಾಗುತ್ತಿದೆ.

	1. ವಿವಿಧ ಉದ್ಯಮ ಸಂಸ್ಥೆಗಳು ತಮ್ಮಲ್ಲಿಯ ಉದ್ಯೋಗಾವಕಾಶಗಳಲ್ಲಿ ಸ್ಥಿರತೆಯನ್ನು ಕಾಯ್ದಕೊಳ್ಳಲು ಪ್ರಯತ್ನಿಸುತ್ತವೆ. ಶ್ರಾಯೀಣ ನಿರುದ್ಯೋಗ ಸಂಭವಿಸುವ ಎರಡು ಕ್ಷೇತ್ರಗಳ ಕೈಗಾರಿಕೆಗಳು ಸಹಯೋಗ ಏರ್ಪಡಿಸಿಕೊಳ್ಳಬಹುದು ಒಂದು ಶ್ರಾಯದಲ್ಲಿ ಒಂದು ಕೈಗಾರಿಕೆಯಲ್ಲಿ ಉದ್ಯೋಗದ ಮಟ್ಟ ಇಳಿದಾಗ ಇನ್ನೊಂದು ಕೈಗಾರಿಕೆಯ ಉತ್ಪನ್ನಗಳಿಗೆ ಬೇಡಿಕೆ ಏರಿ, ಅಲ್ಲಿ ಕಾರ್ಮಿಕರಿಗೆ ಹೆಚ್ಚಿನ ಬೇಡಿಕೆ ಇರಬಹುದು. ಬರ್ಫ ಮತ್ತು ಉಣ್ಣೆ ತಯಾರಿಕೆಗಳು ಉದ್ಯೋಗದ ದೃಷ್ಟಿಯಿಂದ ಇಂಥ ಎರಡು ಪರಸ್ಪರ ಪೂರಕ ಕೈಗಾರಿಕೆಗಳು. ಕೆಲವು ಸಂಸ್ಥೆಗಳಲ್ಲಿ ವ್ಯವಹಾರ ಲಾಭಕರವಾಗಿರುವಾಗ ಹೆಚ್ಚಿನ ಕಾರ್ಮಿಕರನ್ನು ಹೊರಗಿನಿಂದ ಉದ್ಯೋಗಕ್ಕೆ ಸೇರಿಸಿಕೊಳ್ಳುವ ಬದಲು ಇದ್ದ ಕಾರ್ಮಿಕರಿಂದಲೇ ಹೆಚ್ಚು ಕಾಲ ಕೆಲಸಮಾಡಿಸಿ ಅವರಿಗೆ ಹೆಚ್ಚಿನ ವೇತನ ಕೊಡಲಾಗುತ್ತದೆ. ವ್ಯವಹಾರ ಮಂದಸ್ಥಿತಿಯಲ್ಲಿದ್ದಾಗ ಆ ಕಾರ್ಮಿಕರು ನಿರ್ದಿಷ್ಟ ವೇಳೆಯಲ್ಲಿ ಮಾತ್ರ ಕೆಲಸ ಮಾಡುತ್ತಾರೆ. ಉದ್ಯಮ ಸಂಸ್ಥೆಗಳು ಹೀಗೆ ತಮ್ಮಲ್ಲಿಯ ಉದ್ಯೋಗಾವಕಾಶಗಳಲ್ಲಿ ಸ್ಥಿರತೆ ಕಾಯ್ದುಕೊಳ್ಳಲು ಪ್ರಯತ್ನಿಸಿದರೂ ಈ ದಿಶೆಯಲ್ಲಿ ಸಂಪೂರ್ಣ ಯಶಸ್ಸು ಸಾಧಿಸಲಾಗಿಲ್ಲ.

	ನಿರುದ್ಯೋಗ ವಿಮಾಯೋಜನೆ ಒಂದು ಮಹತ್ತ್ವದ ಕ್ರಮ. ಸ್ವಯಂದೋಷದಿಂದಲ್ಲದೆ ಬೇರೆ ಕಾರಣಗಳಿಂದಾಗಿ ನಿರುದ್ಯೋಗಿಯಾಗಿರುವ ಕಾರ್ಮಿಕನಿಗೆ ಅವನ ಹಾಗೂ ಅವನ ಕುಟುಂಬದ ಜೀವನೋಪಾಯಕ್ಕಾಗಿ ಕೆಲವೊಂದು ಆರ್ಥಿಕ ಹಾಗೂ ಇತರ ಸೌಲಭ್ಯಗಳನ್ನು ಒದಗಿಸಲಾಗುತ್ತದೆ. ಈ ಯೋಜನೆಯನ್ನು ಮೊದಲು ಸ್ವಿಟ್‍ಜóರ್ಲೆಂಡ್ ದೇಶದಲ್ಲಿ 18ನೆಯ ಶತಮಾನದ ಕೊನೆಯ ಭಾಗದಲ್ಲಿ ರೂಪಿಸಲಾಯಿತಾದರೂ ಅದು ಕಾರ್ಯಾಚರಣೆಯಲ್ಲಿ ಬಂದದ್ದು ಇಪ್ಪತ್ತನೆಯ ಶತಮಾನದಲ್ಲಿ. ಅನೇಕ ದೇಶಗಳಲ್ಲಿ ಈ ಯೋಜನೆಯ ಹಣಕಾಸಿನ ಹೊಣೆಯನ್ನು ಸರ್ಕಾರ, ಉದ್ಯಮಗಳ ಒಡೆಯರು ಹಾಗೂ ಉದ್ಯೋಗದಲ್ಲಿರುವ ಕಾರ್ಮಿಕರು ಸಂಯುಕ್ತವಾಗಿ ಹೊತ್ತುಕೊಳ್ಳುವ ವ್ಯವಸ್ಥೆಯಿದೆ. ದುರ್ಬಲರನ್ನು ರಕ್ಷಿಸುವುದು ಸಾಮಾಜಿಕ ಹೊಣೆ ಎಂಬ ತತ್ತ್ವವೇ ಈ ವ್ಯವಸ್ಥೆಗೆ ಆಧಾರ.

	ಅಮೆರಿಕದಲ್ಲಿ ಈ ಯೋಜನೆಯನ್ನು ಹಣಕಾಸಿನ ಒಡೆಯರೇ ವಹಿಸಿಕೊಳ್ಳಬೇಕು. ತಮ್ಮ ಕಾರ್ಮಿಕರು ಎದುರಿಸಬಹುದಾದ ನಿರುದ್ಯೋಗವನ್ನು ಒಡೆಯರೇ ನಿಗ್ರಹಿಸಬಲ್ಲರು ಎಂಬ ಭಾವನೆಯೇ ಈ ವ್ಯವಸ್ಥೆಗೆ ಕಾರಣ. ಪ್ರತಿಯೊಬ್ಬ ಒಡೆಯನೂ ನಿರ್ವಹಿಸಬೇಕಾದ ನಿರುದ್ಯೋಗ ವಿಮೆಯ ವೆಚ್ಚದ ಪರಿಮಾಣವನ್ನು ಅವನ ಸಂಸ್ಥೆಯಲ್ಲಿ ಸಂಭವಿಸಬಹುದಾದ ನಿರುದ್ಯೋಗದ ಪರಿಮಾಣದ ಮೇಲೆ ನಿರ್ಧರಿಸಲಾಗುತ್ತದೆ. ಆದ್ದರಿಂದ ಒಡೆಯರು ತಮ್ಮಲ್ಲಿಯ ನಿರುದ್ಯೋಗ ಸಂಭಾವ್ಯತೆಯನ್ನು ಕಡಿಮೆ ಮಾಡಲು ಪ್ರಯತ್ನಿಸುವುದು ಸಹಜ.

	ಆರ್ಥಿಕ ಕುಸಿತದ ಸಮಯದಲ್ಲಿ ಆರ್ಥಿಕತೆಗೆ ಚೈತನ್ಯ ನೀಡಲು ಸರ್ಕಾರ ಲೋಕೋಪಯೋಗಿ ಕಾರ್ಯಗಳನ್ನು ಪ್ರಾರಂಭಿಸುವುದು ಹಲವು ದೇಶಗಳಲ್ಲಿ ಸಾಮಾನ್ಯವಾಗಿದೆ. ಏಕೆಂದರೆ ಖಾಸಗಿ ರಂಗ ನಿಸ್ತೇಜವಾದಾಗ ಸಂಭವಿಸುವ ಶೂನ್ಯವನ್ನು ಸರ್ಕಾರ ತುಂಬಬೇಕು. ಲೋಕೋಪಯೋಗಿ ಕಾರ್ಯಕ್ರಮಗಳನ್ನು ಪ್ರಾರಂಭಿಸಿ ಉದ್ಯೋಗಾವಕಾಶಗಳನ್ನು ಕಲ್ಪಿಸುವುದು ಸರ್ಕಾರದ ಹೊಣೆ. ಕ್ಷಿಪ್ರ ಆದಾಯದ ನಿರೀಕ್ಷೆಯಿಲ್ಲದೆ ದೊಡ್ಡ ದೊಡ್ಡ ಯೋಜನೆಗಳನ್ನು ಪ್ರಾರಂಭಿಸುವುದು ಸರ್ಕಾರಕ್ಕೆ ಮಾತ್ರ ಸಾಧ್ಯ. ವ್ಯವಹಾರ ಚಕ್ರಗಳ ಪರಿಣಾಮವಾಗಿ ಖಾಸಾಗಿ ವಲಯದಲ್ಲಾಗುವ ಏರಿಳಿತಗಳನ್ನು ತಪ್ಪಿಸಿ ಸ್ಥಿರತೆಯನ್ನು ಕಾಪಾಡುವುದು ಸರ್ಕಾರದ ವಿಧಾಯಕ ಕಾರ್ಯಕ್ರಮಗಳಿಂದಲೇ ಸಾಧ್ಯವೆಂಬುದನ್ನು ಮನಗಾಣಲಾಗಿದೆ.

	ಕೊನೆಯದಾಗಿ, ದೇಶದಲ್ಲಿ ಕೇಂದ್ರೀಯ ಬ್ಯಾಂಕಿಂಗ್ ಸಂಸ್ಥೆ ಅನುಸರಿಸುವ ಪರಿಣಾಮಕಾರಿ ಆರ್ಥಿಕ ನೀತಿಯಿಂದ ನಿರುದ್ಯೋಗವನ್ನು ತಡೆಗಟ್ಟಬಹುದು. ದೇಶದ ಒಟ್ಟು ಹಣದಲ್ಲಿ ಬ್ಯಾಂಕ್ ಉದರಿಯ ಪಾತ್ರ ಮಹತ್ತ್ವದ್ದಾಗಿದೆ. ದೇಶದಲ್ಲಿಯ ವಾಣಿಜ್ಯ ಬ್ಯಾಂಕುಗಳ ಮೇಲೆ ಸರ್ಕಾರ ಹಾಗೂ ಕೇಂದ್ರೀಯ ಬ್ಯಾಂಕಿನ ನಿಯಂತ್ರಣ ಸಾಕಷ್ಟು ಇರುವುದರಿಂದ ಆರ್ಥಿಕ ಕುಸಿತದ ಸಮಯದಲ್ಲಿ ಉದ್ಯೋಗಾವಕಾಶಗಳನ್ನು ಹೆಚ್ಚಿಸಲು ಬ್ಯಾಂಕುಗಳ ಉದಾರ ನೀತಿಯನ್ನು ಸಡಿಲಗೊಳಿಸುವಂತೆ ಮಾಡಲು ಕೇಂದ್ರೀಯ ಬ್ಯಾಂಕು ಕ್ರಮ ತೆಗೆದುಕೊಳ್ಳಬಹುದು. (ನೋಡಿ- ಕೇಂದ್ರೀಯ-ಬ್ಯಾಂಕು) ನಿರುದ್ಯೋಗ ನಿವಾರಣೆ ಸರ್ಕಾರದ ಹೊಣೆಯಾಗಿರುವುದರಿಂದ ಅದಕ್ಕಾಗಿ ರಾಷ್ಟ್ರೀಯ ನೀತಿಯನ್ನು ರೂಪಿಸುವುದು ಅತ್ಯಂತ ಮಹತ್ತ್ವದ್ದೆನಿಸಿದೆ.

	ಪೂರ್ಣೋದ್ಯೋಗ ಮತ್ತು ನಿರುದ್ಯೋಗ: ಮೇಲೆ ಹೇಳಿದಂಥ ನಿರುದ್ಯೋಗ ಸಮಸ್ಯೆ ಪರಿಹಾರವಾಗಬೇಕಾದರೆ ಪೂರ್ಣ ಉದ್ಯೋಗವನ್ನು ಸಾಧಿಸಬೇಕು. ವಿಶ್ವದ ಎಲ್ಲ ರಾಷ್ಟ್ರಗಳೂ ಇಂದು ಪೂರ್ಣೋದ್ಯೋಗದ ಮಟ್ಟವನ್ನು ಸಾಧಿಸುವುದನ್ನೇ ತಮ್ಮ ಆರ್ಥಿಕ ನೀತಿಯ ಅಂತಿಮ ಗುರಿಯಾಗಿರಿಸಿಕೊಂಡಿವೆ. ಕಾರ್ಯಸಾಮಥ್ರ್ಯವುಳ್ಳ ಎಲ್ಲ ಯುವಕರೂ ಪ್ರಚಲಿತ ವೇತನ ಮಟ್ಟಕ್ಕೆ ಅನುಗುಣವಾಗಿ ನಿತ್ಯವೂ, ಯೋಗ್ಯವೆನಿಸಿದ ಕಾಲಾವಧಿಯ ವರೆಗೆ, ಕೆಲಸ ಮಾಡಲು ಅವಕಾಶ ಇರುವ ಸ್ಥಿತಿಯೇ ಪೂರ್ಣೋದ್ಯೋಗ. ಪ್ರಚಲಿತ ವೇತನ ಮಟ್ಟದ ಮೇಲೆ ಕಾರ್ಯ ಮಾಡಲು ಇಚ್ಛಿಸುವ ಪ್ರತಿಯೊಬ್ಬನೂ ವಾಸ್ತವಿಕವಾಗಿ ಉದ್ಯೋಗ ದೊರಕಿಸಿಕೊಂಡರೆ ಅಂಥ ಸ್ಥಿತಿ ಪೂರ್ಣೋದ್ಯೋಗ ಎಂದು ಎ. ಸಿ. ಪಿಗೂ ಹೇಳುತ್ತಾರೆ. ಆದರೆ ಇದನ್ನು ಸಾಧಿಸುವುದು ಅಸಾಧ್ಯವೆಂಬುದು ಅನುಭವವಾಗಿದೆ. ಜೆ. ಎಂ. ಕೇನ್ಸ್‍ರು ಪೂರ್ಣೋದ್ಯೋಗವನ್ನು ಉದ್ಯೋಗದ ಗರಿಷ್ಠ ಸಾಧ್ಯ ಮಟ್ಟ, ಇಲ್ಲವೆ ಅನೈಚ್ಛಿಕ ನಿರುದ್ಯೋಗದ ಕನಿಷ್ಟಸಾಧ್ಯ ಮಟ್ಟ ಎಂದು ವಿವರಿಸಿದ್ದಾರೆ. ಏಕೆಂದರೆ, ಪೂರ್ಣೋದ್ಯೋಗದ ಮಟ್ಟವನ್ನು ತಲುಪಿದ ಯಾವುದೇ ಆರ್ಥಿಕತೆಯಲ್ಲೂ ಅನೈಚ್ಛಿಕ ನಿರುದ್ಯೋಗ ಅಲ್ಪವಾದರೂ ಇದ್ದೇ ಇರುವುದುಂಟು. ಘರ್ಷಣಾತ್ಮಕ ಮತ್ತು ಶ್ರಾಯಿಣ ನಿರುದ್ಯೋಗಗಳು ಉದಾಹರಣೆಗಳು. ಅಲ್ಲದೇ ಒಂದು ದೇಶದಲ್ಲಿ ಪ್ರಚಲಿತವಿರುವ ಸಾಮಾಜಿಕ ಪದ್ಧತಿಗಳು ಹಾಗೂ ಸಾಂಸ್ಥಿಕ ವ್ಯವಸ್ಥೆಯಲ್ಲಿ ಕೆಲವರು ಕಡ್ಡಾಯವಾಗಿ ನಿರುದ್ಯೋಗಿಗಳಿರುವುದುಂಟು. ಯುವಕರು ಶಾಲೆ ಬಿಡುವ ವಯಸ್ಸಿಗೆ ಮೊದಲು ಹಾಗೂ ವಯಸ್ಕರು ನಿವೃತ್ತಿಯ ವಯಸ್ಸಿನ ಅನಂತರ ಕಾರ್ಯ ಸಾಮಥ್ರ್ಯವಿದ್ದರೂ ನಿಯಮಾನುಗುಣವಾಗಿ ನಿರುದ್ಯೋಗಿಗಳಾಗಿರುತ್ತಾರೆ. ಅಂತೆಯೇ ಅಸ್ವಸ್ಥರು, ರೋಗಪೀಡಿತರು, ಕೆಲಸ ಮಾಡಲು ಅಸ್ಪಸ್ವಲ್ಪ ಸಾಮಥ್ರ್ಯವಿದ್ದರೂ ನಿರುದ್ಯೋಗಿಗಳಾಗಿರಬೇಕಾಗಬಹುದು. ಇಂಥವರನ್ನು ಬಿಟ್ಟು ಉದ್ಯೋಗಾರ್ಹತೆ ಉಳ್ಳ ಮಿಕ್ಕ ಎಲ್ಲರಿಗೂ ಉದ್ಯೋಗ ದೊರಕಿದ್ದರೆ, ಆಗ ದೇಶದಲ್ಲಿ ಪೂರ್ಣೋದ್ಯೋಗ ಇದೆಯೆಂದು ತಿಳಿಯಬೇಕು. ಪೂರ್ಣೋದ್ಯೋಗದ ವ್ಯವಸ್ಥೆಯಲ್ಲಿ ಉದ್ಯೋಗದ ಸಂಭಾವನೆ ಅಥವಾ ವೇತನದ ಮಟ್ಟವನ್ನು ಪರಿಗಣಿಸಬಾರದೆಂಬುದು ಕೆಲವು ಅರ್ಥಶಾಸ್ತ್ರಜ್ಞರ ಮತ. ಅಧಿಕಾರಿಶಾಹಿ ದೇಶಗಳಲ್ಲಿ ಜನರು ಅಸಮರ್ಪಕ ವೇತನ ಮಟ್ಟದಲ್ಲಿ ಕಡ್ಡಾಯವಾಗಿ ಉದ್ಯೋಗ ಕೈಗೊಳ್ಳಬೇಕಾಗುತ್ತದೆ. ಪ್ರಾಚೀನ ಕಾಲದ ಗುಲಾಮ ರಾಜ್ಯಗಳಲ್ಲಿ ಈ ಬಗೆಯ ಪೂರ್ಣೋದ್ಯೋಗ ಕಾಣಬರುತ್ತಿತ್ತು. ಆದರೆ ಕಾರ್ಯ ಸಾಮಥ್ರ್ಯವುಳ್ಳ ಎಲ್ಲರಿಗೂ ಯೋಗ್ಯ ವೇತನ ಮಟ್ಟದಲ್ಲಿ ಉದ್ಯೋಗ ದೊರಕುವ ಸ್ಥಿತಿಯೇ ಜೆ. ಎಮ್. ಕೇನ್ಸರ ದೃಷ್ಟಿಯಲ್ಲಿ ಪೂರ್ಣೋದ್ಯೋಗ.

	ಯಾವುದೇ ದೇಶ ಪೂರ್ಣೋದ್ಯೋಗದ ಗುರಿಯನ್ನು ಸಾಧಿಸಲು ಎರಡು ಪರಿಮಾಣಗಳನ್ನು ನಿರ್ದಿಷ್ಟಪಡಿಸಬೇಕಾಗುತ್ತದೆ. 1. ವೇತನೋದ್ಯೋಗದ ಅನ್ವೇಷಣೆಯಲ್ಲಿರುವ ಜನರ ಪರಿಮಾಣ, 2. ಅನಿವಾರ್ಯವಾಗಿರಬಹುದಾದ ಘರ್ಷಣಾತ್ಮಕ ಹಾಗೂ ಕಾಲನಿಮಿತ್ತ ನಿರುದ್ಯೋಗದ ಪರಿಮಾಣ. ಈ ಎರಡೂ ಪರಿಮಾಣಗಳನ್ನು ಅಲ್ಪಾವಧಿಯಲ್ಲಿ ನಿರ್ದಿಷ್ಟಪಡಿಸುವುದು ಸಾಧ್ಯವೆಂಬ ಸಂಗತಿ ವಿಶ್ವಸಂಸ್ಥೆ ನಡೆಸಿರುವ ಅಧ್ಯಯನದಿಂದ ಸಿದ್ಧಪಟ್ಟಿದೆ.

	ವಿವೇಕಪೂರ್ಣ ಕರ ನೀತಿ, ಸೂಕ್ತ ಬಡ್ಡಿದರ ನೀತಿ, ಸ್ಥಿರವಾದ ವೇತನ ನೀತಿ, ಅನುಭೋಗ ಮಟ್ಟದ ಸುಧಾರಣೆ, ಕೊರತೆಯ ಹಣಕಾಸು (ಡಿಫಿಸಿಟ್ ಫಿನಾನ್ಸಿಂಗ್) ನೀತಿ ಇವುಗಳ ಮೂಲಕ ನಿರುದ್ಯೋಗವನ್ನು ಹೋಗಲಾಡಿಸಿ ಮೇಲೆ ಹೇಳಿದ ಸ್ವರೂಪದ ಪೂರ್ಣೋದ್ಯೋಗವನ್ನು ಸಾಧಿಸಬಹುದೆಂದು ಪಾಶ್ಚಾತ್ಯ ಅರ್ಥಶಾಸ್ತ್ರಜ್ಞರನೇಕರು ವಾದಿಸಿದ್ದಾರೆ. ಆದರೆ ಅಭಿವೃದ್ಧಿಶೀಲ ಆರ್ಥಿಕತೆಗಳಿಗೆ ಈ ಮಾತುಗಳು ಎಷ್ಟರಮಟ್ಟಿಗೆ ಅನ್ವಯವಾಗುವುವೆಂಬುದು ವಿಶೇಷ ಚರ್ಚೆಯ ವಿಷಯವಾಗಿದೆ. 
(ಕೆ.ಆರ್.ಎಂ.)

	ಅಭಿವೃದ್ಧಿಶೀಲ ದೇಶಗಳಲ್ಲಿ ನಿರುದ್ಯೋಗ: ಅಭಿವೃದ್ಧಿಶೀಲ ದೇಶಗಳಲ್ಲಿ ನಿರುದ್ಯೋಗದ ಪರಿಮಾಣ ಅಧಿಕವಾದ್ದು; ಹಾಗೂ ಇದು ವೈವಿಧ್ಯಮಯವಾದ್ದು. ಇದಕ್ಕೆ ಈ ದೇಶಗಳ ಆರ್ಥಿಕತೆಗಳ ಲಕ್ಷಣವೇ ಕಾರಣ. ಇವುಗಳಲ್ಲಿ ಜನಸಂಖ್ಯೆ ಹೆಚ್ಚಿನ ದರದಲ್ಲಿ ಬೆಳೆಯುತ್ತಿರುವುದರಿಂದ ಉದ್ಯೋಗವನ್ನು ಅರಸುವ ಜನಬಲದ ಗಾತ್ರ ಅಧಿಕ ದರದಲ್ಲಿ ಬೆಳೆಯುತ್ತಿದೆ. ಆದರೆ ಬಂಡವಾಳ ರಚನೆ ಅದೇ ದರದಲ್ಲಿ ಬೆಳೆಯುವುದಿಲ್ಲವಾದ್ದರಿಂದ ಹೆಚ್ಚುವರಿಯಾದ ಜನಬಲವೆಲ್ಲಕ್ಕೂ ದೊರಕುವಷ್ಟು ಉದ್ಯೋಗಾವಕಾಶಗಳು ಸೃಷ್ಟಿಯಾಗುವುದಿಲ್ಲ. ಇದರಿಂದಾಗಿ ನಿರುದ್ಯೋಗದ ಗಾತ್ರ ಕಾಲಕ್ರಮದಲ್ಲಿ ಬೆಳೆದು ದೊಡ್ಡ ಸಮಸ್ಯೆಯಾಗಿ ಪರಿಣಮಿಸಿದೆ.

	ಅಲ್ಲದೆ ಉದ್ಯೋಗಹೀನರಾದ ವ್ಯಕ್ತಿಗಳನೇಕರಿಗೆ ಪರ್ಯಾಯವಾದ ಉದ್ಯೋಗಾವಕಾಶಗಳಿಲ್ಲದ್ದರಿಂದ ಅವರು ಕೃಷಿಯಲ್ಲಿಯೇ ತೊಡಗಿ ಭೂಹಿಡುವಳಿಯ ಮೇಲೆ ಹೆಚ್ಚಿನ ಒತ್ತಡವನ್ನುಂಟುಮಾಡುವರು. ಕುಟುಂಬದ ಉದ್ಯೋಗವಿಲ್ಲದ ಸದಸ್ಯರಿಗೆ ಉಳಿದವರು ಹಿಡುವಳಿಯಲ್ಲಿ ಕೆಲಸ ಹಾಗೂ ಮನೆಯಲ್ಲಿ ಊಟವಸತಿಗಳನ್ನು ಹಂಚಿಕೊಡುವುದು, ಹಿಡುವಳಿಯಲ್ಲಿ ಎಲ್ಲರಿಗೂ ಸಾಕಷ್ಟು ಕೆಲಸವಿಲ್ಲದಿದ್ದರೂ ಉದ್ಯೋಗವಿಲ್ಲದವರು ಕುಟುಂಬದ ಇತರ ಸದಸ್ಯರಿಗೆ ಸಹಾಯಕರಾಗಿ ನಿಲ್ಲುವುದು- ಇದು ಅಲ್ಲಿಯ ಸಾಮಾಜಿಕ ಮೌಲ್ಯಗಳಿಗನುಸಾರವಾಗಿ ಸ್ವಾಭಾವಿಕವಾಗಿ ಬಂದವರ ಪದ್ಧತಿ. ಇದರಿಂದಾಗಿ ಹಿಡುವಳಿಯ ಕೆಲಸ ಹಂಚಿಹೋಗಿ ಎಲ್ಲರಿಗೂ ಕೈತುಂಬ ಕೆಲಸವಿಲ್ಲದಂತಾಗುತ್ತದೆ. ಸ್ಥಿರಗಾತ್ರದ ಹಿಡುವಳಿಯ ಬೇಸಾಯದಲ್ಲಿ ಹೆಚ್ಚು ಹೆಚ್ಚು ಮಂದಿ ತೊಡಗಿದಂತೆ ಸೀಮಾಂತ ಉತ್ಪನ್ನದ ಪರಿಮಾಣ ಕಡಿಮೆಯಾಗುತ್ತ, ಶೂನ್ಯವನ್ನು ಸಮೀಪಿಸುತ್ತ ಬರುತ್ತದೆ. ಇಂಥ ಸ್ಥಿತಿಯಲ್ಲಿ ಹಿಡುವಳಿಯಿಂದ ಕೆಲವರನ್ನು ಹಿಂತೆಗೆದುಕೊಂಡರೂ ಹಿಡುವಳಿಯ ಒಟ್ಟು ಉತ್ಪನ್ನದ ಪರಿಮಾಣದಲ್ಲಿ ಇಳಿಕೆ ಕಂಡುಬರುವುದಿಲ್ಲ. ಈ ವ್ಯಕ್ತಿಗಳ ಉತ್ಪಾದಕತೆ ಶೂನ್ಯವಾದ್ದರಿಂದ, ಇವರು ಬೇಸಾಯದಲ್ಲಿ ನಿರತರಾಗಿದ್ದು ತಾಂತ್ರಿಕವಾಗಿ ಉದ್ಯೋಗಿಗಳೆನಿಸಿಕೊಂಡರೂ ವಾಸ್ತವವಾಗಿ ನಿರುದ್ಯೋಗಿಗಳೇ ಆಗಿರುತ್ತಾರೆ. ಇಂಥ ನಿರುದ್ಯೋಗವನ್ನು ಪ್ರಚ್ಛನ್ನ (ಕನ್ಸೀಲ್ಡ್) ನಿರುದ್ಯೋಗವೆಂದು ಹೇಳಬಹುದು.

	ಪ್ರಚ್ಛನ್ನ ನಿರುದ್ಯೋಗ ಗ್ರಾಮಪ್ರದೇಶಗಳಲ್ಲಿ ವಿಶೇಷವಾಗಿದ್ದರೂ ನಗರ ಪ್ರದೇಶಗಳಲ್ಲೂ ಇದನ್ನು ಬೇರೆ ರೂಪದಲ್ಲಿ ಕಾಣಬಹುದು. ಕೃಷಿಕ್ಷೇತ್ರದಲ್ಲಿ ಜನಸಂಖ್ಯೆಯ ಒತ್ತಡದ ಕಾರಣ ಅಲ್ಲಿಯ ವೇತನದರಗಳು ತೀರ ಕೆಳಮಟ್ಟದಲ್ಲಿರುವುದು ಸ್ವಾಭಾವಿಕ. ಆದರೆ ನಗರಗಳಲ್ಲಿ ಕೈಗಾರಿಕೆಗಳ ಸ್ಥಾಪನೆ ಹಾಗೂ ಕಾರ್ಮಿಕ ಸಂಘ ಮತ್ತು ಸರ್ಕಾರಿ ನಿಯಂತ್ರಣಗಳ ಕಾರಣ ವೇತನ ಮೇಲ್ಮಟ್ಟದಲ್ಲಿರುತ್ತದೆ. ಮೇಲ್ಮಟ್ಟದ ವೇತನದ ಆಕರ್ಷಣೆಯಿಂದಲೂ ಇಲ್ಲಿ ಉದ್ಯೋಗಾವಕಾಶಗಳು ಧಾರಾಳವಾಗಿವೆಯೆಂಬ ನಂಬಿಕೆಯಿಂದಲೂ ಗ್ರಾಮಪ್ರದೇಶದಿಂದ ನಗರಗಳೆಡೆಗೆ ಜನರು ವಲಸೆ ಬರುತ್ತಾರೆ. ಆದರೆ ಕುಶಲಿಗಳಲ್ಲದ ಇವರಿಗೆ ಕೈಗಾರಿಕೋದ್ಯಮಗಳಲ್ಲಿ ಅವಕಾಶ ಸಿಗದ ಕಾರಣ ಇವರು ಕಡಿಮೆ ಕೂಲಿಗೆ ಸಣ್ಣಪುಟ್ಟ ಉದ್ಯಮಗಳಲ್ಲಿ ಪುಡಿಗೆಲಸ ಹಿಡಿದೋ ರಸ್ತೆಗಳಲ್ಲಿ ಕಾಳುಕಡ್ಡಿ ಮಾರುವುದರ ಮೂಲಕವೋ ಜೀವನ ನಡೆಸುತ್ತಾರೆ. ನಗರಪ್ರದೇಶದಲ್ಲಿ ಒಂದು ಬಗೆಯ ಅನೌಪಚಾರಿಕ ಉದ್ಯೋಗ ಕ್ಷೇತ್ರ ಅಸ್ತಿತ್ವಕ್ಕೆ ಬರುತ್ತದೆ. ಸಮರ್ಪಕವಾದ ಉದ್ಯೋಗ ಸಿಗುವ ತನಕ ಹೇಗೋ ಜೀವನ ತಳ್ಳಬೇಕೆಂದು ಕೆಲಸಕ್ಕೆ ಸೇರಿಕೊಳ್ಳುವವರ ಸಂಖ್ಯೆಯೇ ಈ ಕ್ಷೇತ್ರದಲ್ಲಿ ಹೆಚ್ಚಾಗಿರುತ್ತದೆ. ಇಲ್ಲಿ ನಿರತರಾಗಿರುವ ವ್ಯಕ್ತಿಗಳಿಗೆ ಸಿಗುವ ಕೂಲಿ ಅಥವಾ ವರಮಾನ ತತ್ಸದೃಶವಾದ ಇತರ ಉದ್ಯೋಗಗಳಲ್ಲಿ ಸಿಗುವುದಕ್ಕಿಂತ ಅಥವಾ ಇವರ ಕುಶಲತೆಗೆ ನ್ಯಾಯವಾಗಿ ಸಿಗಬೇಕಾದ್ದಕ್ಕಿಂತ ಕಡಿಮೆಯಾಗಿರುತ್ತದೆ. ಇವರು ಅಕ್ಷರಶಃ ಉದ್ಯೋಗಿಗಳೆನಿಸಿದ್ದರೂ ಇವರ ಶ್ರಮ ಅಥವಾ ಕುಶಲತೆ ಪೂರ್ಣವಾಗಿ ಉಪಯೋಗಕ್ಕೆ ಬಾರದೆ ನ್ಯಾಯಸಮ್ಮತವಾದ ಕೂಲಿ ಸಿಗದೆ ಇರುವುದರಿಂದ ಇವರನ್ನು ಅಪೂರ್ಣ ನಿರುದ್ಯೋಗಿಗಳೆಂದು ಪರಿಗಣಿಸಲಾಗಿದೆ.

	ಅಭಿವೃದ್ಧಿಶೀಲ ದೇಶಗಳಲ್ಲಿ ಅನುಭೋಗ ಹಾಗೂ ಉತ್ಪಾದನ ಕ್ಷೇತ್ರಗಳಲ್ಲಿ ಆಧುನಿಕತೆಯ ಪ್ರವೃತ್ತಿ ತೀವ್ರವಾಗಿದೆ. ವಿದೇಶೀಯರನ್ನು ಅನುಕರಿಸುವ ಪ್ರವೃತ್ತಿ ಜನರಲ್ಲಿ ಬೆಳೆದಿರುವುದು ಇದಕ್ಕೆ ಕಾರಣ. ಅನುಭೋಗದಲ್ಲಿ ಆಧುನಿಕತೆಯ ಪ್ರವೃತ್ತಿಯಿಂದಾಗಿ, ಸ್ವದೇಶದಲ್ಲೇ ತಯಾರಾಗುವ ಸರಕುಗಳಿಗೆ ಆಮದು ಸರಕುಗಳು ಪ್ರತಿನಿಧಾನಿಸಲ್ಪಡುತ್ತದೆ. ಇದರಿಂದ ದೇಶೀಯ ಕೈಗಾರಿಕೆಗಳಿಗೆ ಪ್ರೋತ್ಸಾಹವಿಲ್ಲದೆ ಅವು ಕ್ಷೀಣಿಸಿ ನಿರುದ್ಯೋಗವುಂಟಾಗುತ್ತದೆ. ಅಲ್ಲದೆ ಆಧುನಿಕ ಉತ್ಪಾದನ ವಿಧಾನಗಳು ಬಂಡವಾಳಪ್ರಧಾನವಾದ ಕಾರಣ ಯಂತ್ರಗಳು ಕಾರ್ಮಿಕರನ್ನು ಪ್ರತಿನಿಧಾನಿಸಿ ನಿರುದ್ಯೋಗವನ್ನು ಉಂಟುಮಾಡುತ್ತದೆ. ಹೀಗೆ ಆರ್ಥಿಕತೆಯಲ್ಲಿ ಉಂಟಾಗುವ ಸಂರಚನೆಗೆ ಸಂಬಂಧಿಸಿದ, ಬದಲಾವಣೆಗಳಿಂದಾಗಿ ನಿರುದ್ಯೋಗ ಸಂಭವಿಸುತ್ತದೆ.

	ಅಧಿಕ ಜನಬಲ ಇರುವ ಈ ದೇಶಗಳು ಬಂಡವಾಳಪ್ರಧಾನ ಉತ್ಪಾದನ ಕ್ರಮಗಳನ್ನು ಅನುಸರಿಸುವುದು ವಿಚಿತ್ರವೆನಿಸಿದೆ. ಆದರೆ ಇಲ್ಲಿಯ ಉತ್ಪಾದನಕಾರಕಗಳ ಬೆಲೆಗಳ ವಿಕೃತತೆಯಿಂದಾಗಿ ಹೀಗಾಗಿದೆಯೆಂದು ವಿವರಣೆ ನೀಡಲಾಗಿದೆ. ಕನಿಷ್ಠವೇತನ ನಿಗದಿಯಿಂದಾಗಿ ಶ್ರಮದ ಬೆಲೆ ಅದರ ಮಾರುಕಟ್ಟೆ ಬೆಲೆಗಿಂತ ಹೆಚ್ಚಿನ ದರಗಳಲ್ಲೂ, ಸರ್ಕಾರದ ಅಗ್ಗದ ಹಣ ನೀತಿಯಿಂದಾಗಿ ಬಂಡವಾಳದ ಬೆಲೆ ಮಾರುಕಟ್ಟೆ ಬೆಲೆಗಿಂತ ಕಡಿಮೆಯ ದರಗಳಲ್ಲೂ ಚಾಲ್ತಿಯಾಗಿರುತ್ತದೆ. ಆದಕಾರಣ ವೇತನ ಮತ್ತು ಬಡ್ಡಿ ದರಗಳು ಅನುಕ್ರಮವಾಗಿ ಶ್ರಮ ಮತ್ತು ಬಂಡವಾಳಗಳ ನಿಜಬೆಲೆಗಳನ್ನು ಸೂಚಿಸದೆ, ಉದ್ಯಮಗಳು ಉತ್ಪಾದನಕಾರಕಗಳ ನೀಡಿಕೆಗಳ ಪರಿಮಾಣಗಳಿಗೆ ಹೊಂದಾಣಿಕೆಯಲ್ಲಿ ಇರದಂಥ ವಿಧಾನಗಳನ್ನು ಅನುಸರಿಸುವಂತಾಗುತ್ತದೆ. ಈ ಪರಿಸ್ಥಿತಿಯನ್ನು ಸರಿಪಡಿಸಲು ಸಹಾಯವಾಗಲು ಛಾಯಾ ಬೆಲೆ ನಿರ್ಣಯ (ಷ್ಯಾಡೋ ಪ್ರೈಸಿಂಗ್) ಕ್ರಮವನ್ನು ಅನುಸರಿಸಬೇಕೆಂಬ ಸಲಹೆ ನೀಡಲಾಗಿದೆ. ಎಂದರೆ ವೇತನ ಮತ್ತು ಬಡ್ಡಿದರಗಳ ನಿಜಬೆಲೆಗಳನ್ನು ಕಂಡುಹಿಡಿದು ಅವಕ್ಕೆ ಅನುಗುಣವಾಗಿ ವೇತನ ಧನಸಹಾಯ-ಬಂಡವಾಳದ ಮೇಲೆ ಕರ ಹೇರಿಕೆ-ಇವುಗಳ ಮೂಲಕ ಉತ್ಪಾದನಕಾರಕಗಳ ಇರುವಿಕೆಯ ಪರಿಮಾಣಗಳಿಗೆ ಹೊಂದಾಣಿಕೆಯಾಗುವ ಉತ್ಪಾದನ ಕ್ರಮಗಳನ್ನು ರೂಢಿಸಿಕೊಳ್ಳುವಂತೆ ಉದ್ಯಮಿಗಳನ್ನು ಪ್ರೇರೇಪಿಸಬಹುದು.

	ಅಭಿವೃದ್ಧಿಶೀಲ ದೇಶಗಳಲ್ಲಿ ವಿದ್ಯಾರ್ಜನೆಯ ಸ್ಫೋಟವುಂಟಾಗಿದೆ. ಇದರಿಂದ ಹೆಚ್ಚು ಹೆಚ್ಚು ಮಂದಿ ಉನ್ನತ ವ್ಯಾಸಂಗ ಪಡೆದು ಉದ್ಯೋಗದ ಮಾರುಕಟ್ಟೆಗೆ ಇಳಿಯುತ್ತಿದ್ದಾರೆ. ಆದರೆ ಅಲ್ಲಿಯ ಶಿಕ್ಷಣವ್ಯವಸ್ಥೆ ಉದ್ಯೋಗಾಭಿಮುಖವಾದ್ದಲ್ಲ. ಪ್ರತಿಹಂತದಲ್ಲಿಯ ಶಿಕ್ಷಣವೂ ಅದಕ್ಕಿಂತ ಮೇಲಿನ ಹಂತಕ್ಕೆ ವಿದ್ಯಾರ್ಥಿಗಳನ್ನು ಕೊಂಡೊಯ್ಯುವಂಥದೇ ಹೊರತು, ಆ ಹಂತ ಮುಗಿದ ಕೂಡಲೇ ವಿದ್ಯಾರ್ಥಿ ನೇರವಾಗಿ ಯಾವುದೇ ಕುಶಲ ಉದ್ಯೋಗವನ್ನು ಹಿಡಿಯುವಂತೆ ಸಹಕರಿಸುವುದಿಲ್ಲ. ಹೀಗಾಗಿ ಅಲ್ಲಿಯ ಅನೇಕ ವಿದ್ಯಾವಂತರು ನಿರುದ್ಯೋಗಿಗಳಾಗಿಯೇ ಉಳಿಯುವ ಪರಿಸ್ಥಿತಿ ಉಂಟಾಗಿದೆ.

	ಆದ್ದರಿಂದ ಅಭಿವೃದ್ಧಿಶೀಲ ದೇಶಗಳಲ್ಲಿ ವ್ಯಕ್ತ ನಿರುದ್ಯೋಗವಲ್ಲದೆ ಪ್ರಚ್ಛನ್ನ ನಿರುದ್ಯೋಗ, ಅಪೂರ್ಣ ನಿರುದ್ಯೋಗ, ಸಂರಚನಾತ್ಮಕ ನಿರುದ್ಯೋಗ ಮತ್ತು ವಿದ್ಯಾವಂತರ ನಿರುದ್ಯೋಗ-ಹೀಗೆ ನಿರುದ್ಯೋಗದ ಹಲವು ಪ್ರಕಾರಗಳಿರುತ್ತವೆ. ಮುಂದುವರಿದ ರಾಷ್ಟ್ರಗಳಲ್ಲಿ ಸಾಮಾನ್ಯವಾಗಿ ಪ್ರಯೋಗಿಸುವ ಪರಿಹಾರ ಕ್ರಮಗಳು ಇಲ್ಲಿಯ ನಿರುದ್ಯೋಗ ಸಮಸ್ಯೆಗೆ ಪರಿಣಾಮಕಾರಿಯಾಗುವುದಿಲ್ಲ. ಮುಂದುವರಿದ ದೇಶಗಳಲ್ಲಿ ಬೇಡಿಕೆಯ ಕೊರತೆಯಿಂದ ನಿರುದ್ಯೋಗ ಉಂಟಾಗುವುದರಿಂದ ಸಮರ್ಪಕ ಹಣಕಾಸು ಮತ್ತು ರಾಜ್ಯಕೋಶೀಯ ನೀತಿಗಳನ್ನು ಅನುಸರಿಸಿ ಬೇಡಿಕೆಯ ಪರಿಮಾಣವನ್ನು ಏರಿಸಿ ಸಮಸ್ಯೆಯನ್ನು ಬಗೆಹರಿಸಲಾಗುತ್ತದೆ. ಆದರೆ ಅಭಿವೃದ್ದಿಶೀಲ ದೇಶಗಳಲ್ಲಿಯ ನಿರುದ್ಯೋಗ, ಬೇಡಿಕೆಯ ಕೊರತೆಗಿಂತ ಹೆಚ್ಚಾಗಿ ಬಂಡವಾಳದ ಕೊರತೆಯಿಂದ ಉಂಟಾದ್ದು. ಆದಕಾರಣ ಬಂಡವಾಳ ಸಂರಚನೆಯನ್ನು ಅಧಿಕ ದರದಲ್ಲಿ ಕೈಗೊಳ್ಳುವುದರ ಮೂಲಕ ಉದ್ಯೋಗದ ಗಾತ್ರವನ್ನು ಹೆಚ್ಚಿಸಬಹುದೆಂಬ ಭಾವನೆ ಬೆಳೆದು ಬಂತು. ಅಭಿವೃದ್ಧಿಶೀಲ ದೇಶಗಳಲ್ಲಿ ಪ್ರಸ್ತುತ ವೇತನದರದಲ್ಲಿ ಅಮಿತವಾದ ಶ್ರಮ ಸರಬರಾಜು ಕಂಡುಬರುವುದರಿಂದ, ಕೈಗಾರಿಕಾಕ್ಷೇತ್ರದಲ್ಲಿ ಬಂಡವಾಳವನ್ನು ಹೂಡುವುದರ ಮೂಲಕ ಅಧಿಕ ಕಾರ್ಮಿಕರನ್ನು ಅಲ್ಲಿ ನೇಮಿಸಿಕೊಳ್ಳಬಹುದೆಂಬುದನ್ನು ಆರ್ತರ್ ಲ್ಯೂಯಿಸ್ ಮುಂತಾದವರು ರಚಿಸಿದ ಶ್ರಮಾಧಿಕ್ಯದ ಅಭಿವೃದ್ಧಿ ಮಾದರಿ ತೋರಿಸಿಕೊಟ್ಟಿತು. ಈ ಆಲೋಚನಾ ಧಾಟಿಯನ್ನು ಒಪ್ಪಿಕೊಂಡ ಅನೇಕ ಅಭಿವೃದ್ಧಿಶೀಲ ದೇಶಗಳು ಕೈಗಾರಿಕ ಪ್ರಧಾನ ಪಂಚವಾರ್ಷಿಕ ಯೋಜನೆಗಳನ್ನು ರೂಪಿಸಿ ನಿರುದ್ಯೋಗ ಸಮಸ್ಯೆಯನ್ನು ಪರಿಹರಿಸುವ ಕ್ರಮ ಕೈಗೊಂಡವು.

	ಆದರೆ ವಿನಿಯೋಜನೆಯ (ಇನ್ವೆಸ್ಟ್‍ಮೆಂಟ್) ಬೆಳವಣಿಗೆಯ ದರದಲ್ಲೇ ಉದ್ಯೋಗಾವಕಾಶಗಳು ಉಂಟಾಗಲಿಲ್ಲ. ಅಲ್ಲದೆ ಯೋಜನೆಯಿಂದ ಯೋಜನೆಗೆ ನಿರುದ್ಯೋಗಿಗಳ ಪರಿಮಾಣ ಏರುತ್ತ ಬಂತು. ಯೋಜನೆಗಳ ತಪ್ಪು ವಿನ್ಯಾಸವೇ ಇದಕ್ಕೆ ಕಾರಣ. ಉದ್ಯೋಗಾವಕಾಶಗಳ ಸೃಷ್ಟಿಗಾಗಿಯೇ ಯೋಚಿಸಬೇಕಿಲ್ಲವೆಂದೂ ವಿನಿಯೋಜನೆಯ ಗಾತ್ರವನ್ನು ಹೆಚ್ಚಿಸುವುದರಿಂದ ನಿರುದ್ಯೋಗ ಸಮಸ್ಯೆ ತನ್ನಷ್ಟಕ್ಕೆ ತಾನೇ ಪರಿಹಾರವಾಗುತ್ತದೆ ಎಂದೂ ಅದುವರೆಗೂ ಭಾವಿಸಲಾಗಿತ್ತು. ಆದ್ದರಿಂದ ಆರ್ಥಿಕ ಯೋಜನೆಗಳಲ್ಲಿ ಇತರ ಎಲ್ಲ ನಿರ್ಧಾರಗಳನ್ನು ಕೈಗೊಂಡ ಮೇಲೆ ಉದ್ಯೋಗವಕಾಶಗಳನ್ನು ನಿರ್ಧರಿಸಬಹುದು; ಅದು ಶೇಷ ಅಂಶ ಎಂದುಕೊಳ್ಳಲಾಗಿತ್ತು. ಆದರೆ ಕೇವಲ ವಿನಿಯೋಜನೆಯನ್ನು ಕೈಗೊಳ್ಳುವುದರಿಂದ ಸಾಕಷ್ಟು ಉದ್ಯೋಗಾವಕಾಶಗಳು ಉಂಟಾಗುವುದಿಲ್ಲವೆಂಬುದೂ ಉದ್ಯೋಗಾವಕಾಶಗಳ ಸೃಷ್ಟಿಗಾಗಿಯೇ ಕೈಗೊಂಡ ಸಮರ್ಪಕ ಯೋಜನೆಯಿಂದಲೇ ಅದು ಸಾಧ್ಯವೆಂಬುದೂ ಅಂತರರಾಷ್ಟ್ರೀಯ ಕಾರ್ಮಿಕ ಸಂಸ್ಥೆ ನಡೆಸಿದ ಅನೇಕ ಅಧ್ಯಯನಗಳಿಂದ ವ್ಯಕ್ತವಾದುವು. ಈ ಸತ್ಯವನ್ನು ಮನಗಂಡ ಅಭಿವೃದ್ಧಿಶೀಲ ದೇಶಗಳು ಈಚೆಗೆ ತಮ್ಮ ಆರ್ಥಿಕ ಯೋಜನೆಗಳನ್ನು ಉದ್ಯೋಗಾಭಿಮುಖವಾಗಿಸಿ, ಉದ್ಯೋಗಾವಕಾಶಗಳನ್ನು ಸೃಷ್ಟಿಸುವ ಸಮರ್ಪಕ ಕಾರ್ಯಕ್ರಮಗಳನ್ನು ರೂಪಿಸಿಕೊಳ್ಳುತ್ತಿವೆ.

	ಶಿಕ್ಷಣವನ್ನು ವೃತ್ತಿಗೆ ಅಭಿಮುಖಗೊಳಿಸುವುದರಿಂದಲೂ ನಗರ ಪ್ರದೇಶಗಳಲ್ಲಿ ಆದಷ್ಟುಮಟ್ಟಿಗೆ ಶ್ರಮಪ್ರಧಾನ ಉತ್ಪಾದನ ವಿಧಾನಗಳನ್ನು ಪ್ರಯೋಗಿಸುವಂಥ ಕೈಗಾರಿಕೆಗಳನ್ನು ಸ್ಥಾಪಿಸುವ ಯೋಜನೆಗಳನ್ನು ರೂಪಿಸುವುದರಿಂದಲೂ ವಿದ್ಯಾವಂತರ ನಿರುದ್ಯೋಗವನ್ನೂ ನಗರ ಪ್ರದೇಶಗಳಲ್ಲಿಯ ವ್ಯಕ್ತ ಮತ್ತು ಅಪೂರ್ಣ ನಿರುದ್ಯೋಗಗಳನ್ನು ತಡೆಗಟ್ಟುವ ಪ್ರಯತ್ನ ಈಚೆಗೆ ನಡೆದಿದೆ. ವಿವಿಧ ಕೌಶಲಗಳುಳ್ಳಂಥವರಿಗೆ ಸ್ವೋದ್ಯೋಗಗಳನ್ನು ಕಲ್ಪಿಸಿಕೊಳ್ಳುವಂತೆ ಈ ದೇಶಗಳ ಸರ್ಕಾರಗಳು ಬಂಡವಾಳ, ತರಬೇತು, ತಾಂತ್ರಿಕ ಸಲಹೆ ಮುಂತಾದವನ್ನು ಒದಗಿಸುವ ಯೋಜನೆಗಳನ್ನು ರೂಪಿಸಿ ನೆರವು ನೀಡುತ್ತಿದೆ.

	ಆದರೆ ಪ್ರಚ್ಛನ್ನ ಹಾಗೂ ವ್ಯಕ್ತ ನಿರುದ್ಯೋಗಗಳು ಗ್ರಾಮಪ್ರದೇಶಗಳಲ್ಲಿ ಹೆಚ್ಚಿನ ಪರಿಮಾಣಗಳಲ್ಲಿ ಕಂಡುಬರುವುದರಿಂದ ಈ ದೇಶಗಳು ಆ ಪ್ರದೇಶಗಳ ಸಮಗ್ರ ಅಭಿವೃದ್ಧಿಯನ್ನು ಪ್ರವರ್ತಿಸುವ ಬೃಹತ್ ಯೋಜನೆಗಳನ್ನು ರೂಪಿಸಿಕೊಳ್ಳುತ್ತಿವೆ. ಸ್ಥಳೀಯ ಸಂಪನ್ಮೂಲಗಳನ್ನು ಉಪಯೋಗಿಸಿಕೊಂಡು ತನ್ಮೂಲಕ ಆ ಪ್ರದೇಶಗಳಲ್ಲಿ ವರಮಾನದ ಮಟ್ಟ ಹಾಗೂ ಉದ್ಯೋಗಾವಕಾಶಗಳನ್ನು ಹೆಚ್ಚಿಸುವುದು ಈ ಯೋಜನೆಯ ಮುಖ್ಯ ಧ್ಯೇಯ. ಉದ್ಯೋಗಾವಕಾಶಗಳನ್ನು ಸೃಷ್ಟಿಸುವ ದೃಷ್ಟಿಯಿಂದ ಕೈಗೊಳ್ಳಲಾದ ಕಾರ್ಯಕ್ರಮಗಳ ಪೈಕಿ ಮುಖ್ಯವಾದುವೆಂದರೆ: 1. ಗ್ರಾಮೀಣ ಅಧೋರಚನೆಯೆನಿಸಿದ ಸಣ್ಣ ನೀರಾವರಿ, ಚರಂಡಿ, ಉಗ್ರಾಣ ಮತ್ತು ರಸ್ತೆಗಳ ನಿರ್ಮಾಣ, 2. ಭೂಸವೆತವನ್ನು ರಕ್ಷಿಸುವುದೇ ಮುಂತಾದ ಭೂ ಅಭಿವೃದ್ಧಿ ಕಾರ್ಯಗಳು. 3. ಪಶುಪಾಲನೆ, ಕೋಳಿ ಮೀನು ಜೇನುಗಳ ಸಾಕಣೆ, 4. ಅರಣ್ಯಾಭಿವೃದ್ಧಿ, 5. ಶಿಕ್ಷಣ, ಆರೋಗ್ಯ, ವಸತಿ ಮುಂತಾದ ಗ್ರಾಮೀಣ ಸೇವೆಗಳ ವಿಸ್ತರಣೆ, 6. ಗೃಹ ಮತ್ತು ಸಣ್ಣ ಕೈಗಾರಿಕೆಗಳ ಬೆಳವಣಿಗೆ.

	ಅತ್ಯಂತ ಹೆಚ್ಚಿನ ದರದಲ್ಲಿ ಬೆಳೆಯುತ್ತಿರುವ ಜನಬಲ, ಉತ್ಪಾದನಕಾರಕಗಳ ವಿಕೃತ ಬೆಲೆಗಳ ಕಾರಣದಿಂದಾಗಿ ಬಂಡವಾಳಪ್ರಧಾನ ಉತ್ಪಾದನ ಕ್ರಮಗಳ ಅನುಸರಣೆ-ಇವೆರಡೂ ಅಭಿವೃದ್ಧಿಶೀಲ ರಾಷ್ಟ್ರಗಳ ನಿರುದ್ಯೋಗ ಸಮಸ್ಯೆಯನ್ನು ಜಟಿಲಗೊಳಿಸಿವೆ. ಈ ಸಮಸ್ಯೆಯನ್ನು ಹಗುರಗೊಳಿಸುವ ದೃಷ್ಟಿಯಿಂದ ಈಚೆಗೆ ಈ ದೇಶಗಳಲ್ಲಿ ಶ್ರಮಪ್ರಧಾನ ಅಭಿವೃದ್ದಿ ಕಾರ್ಯಕ್ರಮಗಳನ್ನು ಕೈಗೊಳ್ಳಲಾಗಿದೆ. ಉದ್ಯೋಗಸೃಷ್ಟಿಯ ದೃಷ್ಟಿಯಿಂದ ಈ ಕಾರ್ಯಕ್ರಮಗಳು ಉತ್ತಮವೆನಿಸಿದರೂ ಆರ್ಥಿಕ ಅಭಿವೃದ್ಧಿಯ ದೃಷ್ಟಿಯಿಂದ ಆಕರ್ಷಕವಲ್ಲವೆಂಬ ದೃಷ್ಟಿಕೋನವೂ ಇದೆ. ಇದರಲ್ಲಿ ಸತ್ಯಾಂಶವಿಲ್ಲದಿಲ್ಲ. ಉದ್ಯೋಗಾವಕಾಶಗಳನ್ನು ಹೆಚ್ಚಿಸುವ ದೃಷ್ಟಿಯಿಂದಲೇ ಅನೇಕ ದೇಶಗಳು ಉತ್ಪಾದಕವಲ್ಲದ ಕಾರ್ಯಕ್ರಮಗಳನ್ನು ಕೈಗೊಂಡಿರುವುದೂ ಉಂಟು. ಅಂಥ ಪರಿಸ್ಥಿತಿಯಲ್ಲಿ ಉದ್ಯೋಗಾವಕಾಶಗಳೂ ಆರ್ಥಿಕ ಅಭಿವೃದ್ಧಿಯೂ ಒಂದಕ್ಕೊಂದು ಪೂರಕವಾಗುವ ಬದಲು ಅಸಂಗತವಾಗುವ ಪರಿಸ್ಥಿತಿ ಉಂಟಾಗುತ್ತದೆ. ಯಾವುದೇ ಪರಿಮಾಣದ ಉದ್ಯೋಗಾವಕಾಶಗಳನ್ನು ಸೃಷ್ಟಿಸಬೇಕಾದರೆ ಎಷ್ಟು ಮಟ್ಟಿಗಿನ ಆರ್ಥಿಕ ಅಭಿವೃದ್ಧಿಯನ್ನು ತ್ಯಾಗಮಾಡಬೇಕು ಎಂಬುದು ಸಮಸ್ಯೆ. ಉದ್ಯೋಗಾವಕಾಶಗಳನ್ನು ಸೃಷ್ಟಿಸುವ ಕಾರ್ಯಕ್ರಮ ಆರ್ಥಿಕ ಅಭಿವೃದ್ಧಿಯನ್ನು ಸಾಧಿಸುವ ಯೋಜನೆಯ ಹೊರ ಆವರಣದಲ್ಲಿರದೆ, ಆ ಯೋಜನೆಯಲ್ಲೇ ಇರುವಂತೆ ಅದನ್ನು ಸಂಯೋಜಿಸುವ ಆವಶ್ಯಕತೆ ಉಂಟಾಗುತ್ತದೆ. ಎಂದರೆ ಉದ್ಯೋಗವಕಾಶಗಳನ್ನು ಸೃಷ್ಟಿಸುವ ಸಲುವಾಗಿ ಕೈಗೊಳ್ಳಲಾದ ಕಾರ್ಯಕ್ರಮಗಳು ಉತ್ಪಾದಕಗಳಾಗಿದ್ದು ಬಂಡವಾಳ ಸರಕುಗಳನ್ನು ಸೃಷ್ಟಿಸುವಂಥವೂ ವರಮಾನದ ಉತ್ಪತ್ತಿ ಮಾಡುವಂಥವೂ ಆಗಿರಬೇಕು ಎಂಬುದು ಅತ್ಯಂತ ಮುಖ್ಯವಾದ ಅಂಶ.
(ಎಬಿ.ಎ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ